ಪತಂಜಲಿ -
ಮಹಾಭಾಷ್ಯ ಹಾಗೂ ಯೋಗಸೂತ್ರಗಳ ಕರ್ತೃ. ಚರಕ ಸಂಹಿತೆಯೂ ಈತನದೆಂದೇ ಕೆಲವು ವಾದಿಸುತ್ತಾರೆ. ಯೋಗೇನ ಚಿತ್ತಸ್ಯ ಪದೇನ ವಾಚಾಂ ಮಲಂ ಶರೀರಸ್ಯಚ ವೈದ್ಯಕೇನ ಯೋ ಪಾಕರೋತ್ತಂ ಪ್ರವರಮ ಮುನೀನಾಮ ಪತಂಜಲಿರ ಪ್ರಾಂಜಲಿರಾನತೋ ಸ್ಮಿ || ಎಂಬ ವಿಜ್ಞಾನ ಭಿಕ್ಷುವಿನ ಯೋಗ, ವ್ಯಾಕರಣಮತ್ತು ವೈದ್ಯಶಾಸ್ತ್ರಗಳ ಮೂಲಕ ಮನಸ್ಸು, ಮಾತು ಮತ್ತು ಶರೀರಗಳ ದೋಷಗಳನ್ನು ಪರಿಹರಿಸಿದ ಪತಂಜಲಿಯನ್ನು ಕೊಂಡಾಡುತ್ತದೆ. ತನ್ನ ಮೂರು ಕೃತಿಗಳಿಂದ ಮನೋವಾಕ್ಕಾಯ ದೋಷಗಳನ್ನು ಕಳೆದ ಆದಿಶೇಷನೆಂದು ಪತಂಜಲಿಯನ್ನು ಕೊಂಡಾಡುವ ಚಕ್ರಪಾಣಿಯ ಶ್ಲೋಕವೂ ಇದಕ್ಕೆ ಸಂವಾದಿಯಾಗಿದೆ. ಪತಂಜಲಿಚರಿತವೆಂಬ ಕೃತಿಯನ್ನು ರಚಿಸಿದ ರಾಮಭದ್ರನ (ಹದಿನೆಂಟನೆಯ ಶತಮಾನ) ಅಭಿಪ್ರಾಯವೂ ಇದೇ ಆಗಿದೆ. ಹನ್ನೊಂದನೆಯ ಶತಮಾನದಲ್ಲಿದ್ದ ಭೋಜರಾಜನೂ ಈ ಮೂರು ಗ್ರಂಥಗಳ ಕರ್ಥೃವೊಬ್ಬನೇ ಎಂಬುದನ್ನು ಹೇಳುತ್ತಾನೆ. ಪಾಶ್ಚಾತ್ಯರಲ್ಲಿಯೂ ಕೆಲವರು ಯೋಗಸೂತ್ರ ಮಹಾಭಾಷ್ಯಗಳ ಕರ್ತೃ ಪತಂಜಲಿಯೊಬ್ಬನೇ ಎಂಬ ಅಭಿಪ್ರಾಯವನ್ನೊಪ್ಪುತ್ತಾರೆ. ಮಹಾಭಾಷ್ಯ ಕರ್ತೃ ಪತಂಜಲಿಯೇ ಬೇರೆ, ಯೋಗಸೂತ್ರಕಾರನೇ ಬೇರೆ ಎಂಬ ಅಭಿಪ್ರಾಯವೂ ಉಂಟು. ಪತಂಜಲಿ ಒಬ್ಬನೇ ಅಲ್ಲವೇ ಎಂಬುದು ಇನ್ನೂ ಸಂಶೋಧನೆಗಳ ಬೆಳಕಿನಲ್ಲಿ ನಿರ್ಧಾರವಾಗಬೇಕಾಗಿದೆ.

	ಮಹಾಭಾಷ್ಯದಿಂದ ನಮಗೆ ಪತಂಜಲಿಯ ಬಗ್ಗೆತಿಳಿದುಬರುವ ಅಂಶಗಳಿಷ್ಟು. ಗೋನರ್ದೀಯ, ಗೋಣಿಕಾಪುತ್ರ ಎಂಬ ಉಲ್ಲೇಖಗಳು ಪತಂಜಲಿಗೇ ಅನ್ವಯಿಸುತ್ತವೆ ಎಂಬ ವಾದವನ್ನು ನಾವು ಒಪ್ಪುವ ಪಕ್ಷದಲ್ಲಿ (ಅವು ಬೇರೊಬ್ಬ ವಾರ್ತಿಕಕಾರನಿಗೆ ಅನ್ವಯಿಸುತ್ತವೆ ಎಂಬ ವಾದವೂ ಒಂದಿದೆ) ಈತ ಗೋನರ್ದದೇಶದವ, ಗೋಣಿಕಾ ಎಂಬವಳ ಮಗ, ಗೋನರ್ದ ಪ್ರದೇಶ ಯಾವುದು ಎಂದು ಇನ್ನೂ ನಿರ್ದಿಷ್ಟಗೊಂಡಿಲ್ಲ. ಇವನ ವಿದ್ಯಾಭ್ಯಾಸ ತಕ್ಷಶಿಲೆಯಲ್ಲಿ ನಡೆಯಿತೆಂದೂ ವಾಹೀಕ ಮತ್ತು ಗಾಂಧಾರದೇಶಗಳ ನಗರ, ಹಳ್ಳಿಗಳ ವಿವರವಾದ ಪರಿಚಯ ಇತನಿಗಿತ್ತೆಂದೂ ಮಹಾಭಾಷ್ಯದ ಆಂತರಿಕ ಸಾಕ್ಷ್ಯಗಳಿಂದ ತಿಳಿಯಬಹುದಾಗಿದೆ. ಗೋಣಿಕಾಪುತ್ರ ಎಂಬ ಉಲ್ಲೇಖವೊಂದನ್ನು ಬಿಟ್ಟರೆ ಇವನ ತಾಯಿತಂದೆಗಳ ಬಗ್ಗೆ ಯಾವ ವಿವರವೂ ತಿಳಿದುಬಂದಿಲ್ಲ. 

	ಪತಂಜಲಿಯ ಹುಟ್ಟು ಮತ್ತು ಹೆಸರಿಗೆ ಸಂಬಂಧಿಸಿದ ಹಲವಾರು ಐತಿಹ್ಯಗಳು ಪ್ರಚಾರದಲ್ಲಿವೆ. ಅವುಗಳಲ್ಲೊಂದು ಹೀಗಿದೆ ; ಗೋನರ್ದದ ತಪಸ್ವಯೊಬ್ಬ ಸಂಧ್ಯಾಕಾಲದಲ್ಲಿ ಸೂರ್ಯನಿಗೆ ಅಘ್ರ್ಯ ನೀಡುತ್ತಿದ್ದ ಸಂದರ್ಭದಲ್ಲಿ ಆಕಾಶದಿಂದ ಆತನ ಅಂಜಲಿಯಲ್ಲಿ (ಬೊಗಸೆ) ಶಿಶುವೊಂದು ಬಿತ್ತು. ಆ ಕಾರಣದಿಂದಲೇ ಆ ಶಿಶು ಪತಂಜಲಿ ಎಂಬ ಅನ್ವರ್ಥನಾಮವನ್ನು ಪಡೆಯಿತು. ಆ ಶಿಶುವನ್ನು ತಪಸ್ವಿಯು ಗೋಣಿಕಾ ಎಂಬುವಳಿಗೆ ಕೊಟ್ಟ. ಹೀಗೆ ಪತಂಜಲಿ ಗೋಣಿಕಾ ಎಂಬುವಳ ಸಾಕುಮಗನಾದ. ಪತಂಜಲಿ ಚರಿತದಲ್ಲಿ ಬರುವ ಮತ್ತೊಂದು ಐತಿಹ್ಯ ಹೀಗಿದೆ. ಋಷಿಪುತ್ರಿ ಗೋಣಿಕಾ ಎಂಬಳು ಪುತ್ರ ಕಾಮನೆಯಿಂದ ಸೂರ್ಯನಿಗೆ ಅಘ್ರ್ಯ ನೀಡಿದಳು. ನಾಗರಾಜನಾದ ಶೇಷ ಆ ಸಂದರ್ಭದಲ್ಲಿ ತಪಸ್ವಿಯ ರೂಪದಲ್ಲಿ ಅವಳ ಕೈಯಲ್ಲಿ ಬಿದ್ದ. ಇದರಿಂದ ಆತನಿಗೆ ಪತಂಜಲಿ ಎಂಬ ಹೆಸರು ಬಂತು. ಅನಂತರ ಪತಂಜಲಿ ಚಿದಂಬರದಲ್ಲಿ ಶಿವಾನುಗ್ರಹದಿಂದ ಮಹಾಭಾಷ್ಯವನ್ನು ಬರೆದ. ಫಣಿಭಷತ ಭಾಷ್ಯ ಎಂದು ಮಹಾಭಾಷ್ಯವನ್ನು ಗುರುತಿಸಿದ ಮುಂದಣ ವೈಯಾಕರಣರೂ ಪತಂಜಲಿಯನ್ನು ಆದಿಶೇಷನ ಅವತಾರವೆಂದೂ ಗಣಿಸುತ್ತಾರೆ. ಮಹಾಭಾಷ್ಯದ ಆಂತರಿಕ ಉಲ್ಲೇಖಗಳು ಮತ್ತು ಅಲ್ಲಿ ಬರುವ ಪುಷ್ಯಮಿತ್ರನ ಪ್ರಸಂಗ ಇವುಗಳ ಆಧಾರದ ಮೇಲೆ ಪತಂಜಲಿಯ ಕಾಲ ಕ್ರಿ.ಪೂ. ಎರಡನೆಯ ಶತಮಾನವೆಂದು ವಿದ್ವಾಂಸರು ನಿರ್ಧರಿಸಿದ್ದಾರೆ.

	ಈತ ಅಸಮಾನ ವೈಯಾಕರಣನೆಂಬುದಕ್ಕೆ ಮಹಾಭಾಷ್ಯವೇ ಸಾಕ್ಷಿಯಾಗಿದೆ. ಅಂದು ಬಳಕೆಯಲ್ಲಿದ್ದ ಎಲ್ಲ ಬಗೆಯ ವೈಯಾಕರಣ ಸಂಪ್ರದಾದಾಯಗಳನ್ನೂ ಪಾಣಿನಿ ಸೂತ್ರಗಳ ಬಗೆಗಿದ್ದ ಬಗೆಬಗೆಯ ವಿವರಣೆಗಳನ್ನೂ ನಡೆಯುತ್ತಿದ್ದ ಪಾಠ-ಪ್ರವಚನಗಳ ರೀತಿಗಳನ್ನೂ ಪ್ರತ್ಯಕ್ಷ ಪರಿಶೀಲನೆಯಿಂದಲೇ ಈತ ಅರಿತಿದ್ದನೆಂಬುದು ಮಹಾಭಾಷ್ಯದ ಪರಿಶೀಲನೆಯಿಂದ ಸ್ಫುಟವಾಗುತ್ತದೆ. ಚತುರ್ವೇದಗಳು, ಧರ್ಮಸೂತ್ರ, ಶ್ರೌತ್ರಸೂತ್ರ ಇತಿಹಾಸ, ಪುರಾಣ, ನ್ಯಾಯಸೂತ್ರ ಪೂರ್ವಮೀಮಾಂಸಾ, ವೈದ್ಯ ಶಾಸ್ತ್ರ, ಕಾವ್ಯಗಳು ಮೊದಲಾಗಿ ಅಂದು ಪ್ರಚಲಿತವಿದ್ದ ವಿದ್ಯೆಯ ಎಲ್ಲ ವಿಭಾಗಗಳಲ್ಲಿಯೂ ಇವನಿಗೆ ಆಳವಾದ ಪಾಂಡಿತ್ಯ ಪರಿಶ್ರಮಗಳಿದ್ದವು. ತನ್ನ ಕಾಲದಲ್ಲಿ ಆಡುಭಾಷೆಯಾಗಿದ್ದ ಸಂಸ್ಕøತದ ಮೇಲೆ ಆತನಿಗೆ ಅಸಾಧಾರಣವಾದ ಅಧಿಕಾರವಿತ್ತು. 

	ಮಹಾಭಾಷ್ಯಂ ವಾ ಪಠನೀಯಂ ಮಹಾರಾಜ್ಯಂ ವಾ ಪಾಲನೀಯಂ ಎಂಬ ಅಭಿಯುಕ್ತೋಕ್ತಿಗೆ ವಿಷಯವಾದ ಮಹಾಭಾಷ್ಯ ಒಂದು ವಿಶ್ವಕೋಶವೇ ಸರಿ. ಪತಂಜಲಿ ಕಾಲೀನ ಭಾರತದ ಸಮಗ್ರದರ್ಶನ ಮಾಡಿಸಲು ಈ ಗ್ರಂಥ ಸಮರ್ಥವಾಗಿದೆ. ವಿದ್ವತ್ಪೂರ್ಣವಾದರೂ ಅತ್ಯಂತ ಸರಳವಾದ ಭಾಷ್ಯವಿದು. ಇದೇ ಪಾಣಿನಿಯ ಅಷ್ಟಾಧ್ಯಾಯೀ ಗ್ರಂಥಕ್ಕೆ ಮೊಟ್ಟಮೊದಲ ಮತ್ತು ಅತಿಪ್ರಾಚೀನ ಭಾಷ್ಯ. ವ್ಯಾಕರಣಶಾಸ್ತ್ರಕ್ಕೆ ಸಂಬಮಧಿಸಿದ ಸಮಸ್ಯೆಗಳಿಗೆ ಇದು ನಿರ್ಣಾಯಕ ಗ್ರಂಥವಾಗಿದೆ. ಪಾಣಿನಿ ಸೂತ್ರಗಳಿಗೆ ವ್ಯಾಖ್ಯಾನ ಮಾಡುವುದರ ಜೊತೆಗೆ ತಾನೇ ಅನೇಕ ಅಂಶಗಳನ್ನು ಎತ್ತಿ ಅವುಗಳನ್ನು ಕೂಲಂಕಷವಾಗಿ ವಿಚಾರಿಸಿ ತೀರ್ಮಾನಗಳನ್ನು ನೀಡಿರುವ ಸಂದರ್ಭಗಳೂ ಉಂಟು. ವ್ಯಾಕರಣಕ್ಕೆ ಸಂಬಂಧಿಸಿದಂತೆ ಇದರಲ್ಲಿ ವಿಚಾರಕ್ಕೊಳಪಡದ ಯಾವ ಸಮಸ್ಯೆಯೂ ಇಲ್ಲವೇ ಇಲ್ಲವೆನ್ನುವಷ್ಟು ವ್ಯಾಪಕವಾಗಿದೆ, ಈ ಕೃತಿ.

	ಆಹ್ನಿಕ ಎಂಬ ಹೆಸರುಳ್ಳ ಎಂಬತ್ತೈದು ಭಾಗಗಳನ್ನು ಈ ಕೃತಿ ಒಳಗೊಂಡಿದೆ. ಒಂದು ಹಗಲಿನಲ್ಲಿ ಮುಗಿದದ್ದು ಎಂಬ ಅರ್ಥದಲ್ಲಿ ಆಹ್ನಿಕವೆಂಬ ಹೆಸರು ಬಂದಿರಬಹುದೆಂದು ವ್ಯಾಖ್ಯಾನಕಾರರು ಹೇಳುತ್ತಾರೆ. ಈ ಭಾಷ್ಯಕ್ಕೆ ಅನೇಕ ವ್ಯಾಖ್ಯಾನಗಳಿದ್ದರೂ ಕೈಯಟನ ಪ್ರದೀಪವೆಂಬುದು ಭಾಷ್ಯಕ್ಕೆ ಸಮನಾದ ಗೌರವವನ್ನು ಪಡೆದಿರುವ ವ್ಯಾಖ್ಯಾನವಾಗಿದೆ.

	ಪಾತಂಜಲ ಯೋಗಸೂತ್ರ ಎಂದು ಪತಂಜಲಿಯ ಹೆಸರಿನೊಡನೆಯೇ ಖ್ಯಾತವಾಗಿರುವ ಯೋಗಸೂತ್ರ ಯೋಗದರ್ಶನದ ಆಧಾರಗ್ರಂಥವಾಗಿದೆ. ಯೋಗ ದರ್ಶನವೇ ಪಾತಂಜಲದರ್ಶನವೆಂದೂ ಹೆಸರುಗೊಂಡಿದೆ. ಯೋಗದರ್ಶನದ ಮೂಲ ಪ್ರವರ್ತಕನೆಂದು ಯೋಗಶಾಸ್ತ್ರಗಳು ತಿಳಿಸುವ ಹಿರಣ್ಯಗರ್ಭನ ಸಂಪ್ರದಾಯವನ್ನು ಅನುಸರಿಸಿ ಪತಂಜಲಿ ಯೋಗದರ್ಶನವನ್ನು ಬಿತ್ತರಿಸಿದನೆಂದು ತಿಳಿದುಬರುತ್ತದೆ.

	ಸಮಾಧಿಪಾದ, ಸಾಧನಪಾದ, ವಿಭೂತಿಪಾದ ಮತ್ತು ಕೈವಲ್ಯಪಾದಗಳೆಂಬ ನಾಲ್ಕು ಪಾದಗಳನ್ನೊಳಗೊಂಡ ಯೋಗಸೂತ್ರ ಗ್ರಂಥ. ಒಟ್ಟು ಒಂದುನೂರು ತೊಂಬತ್ತೈದು ಸೂತ್ರಗಳಿಂದ ಕೂಡಿದೆ. ಸಮಾಧಿಯ ಸ್ವರೂಪವನ್ನು ಮೊದಲನೆಯ ಪಾದ ವಿವರಿಸುತ್ತದೆ. ಯಮ, ನಿಯಮ, ಆಸನ, ಪ್ರಾಣಾಯಾಮ ಮತ್ತು ಪ್ರತ್ಯಾಹಾರ ಎಂಬ ಯೋಗದ ಐದು ಅಂಗಗಳು ಮತ್ತು ಸ್ವಾಧ್ಯಾಯ, ಈಶ್ವರ ಪ್ರಣಿಧಾನ ಮೊದಲಾದ ವಿಷಯಗಳು ಎರಡನೆಯ ಪಾದದಲ್ಲಿವೆ. ಮೂರನೆಯ ಪಾದ ಧಾರಣಾ, ಧ್ಯಾನ, ಸಮಾದಿ ಎಂಬ ಯೋಗದ ಉಳಿದ ಮೂರು ಅಂಗಗಳ ವಿವರಣೆಯನ್ನೊಳಗೊಂಡಿದೆ. ಸಿದ್ಧಿಗಳು ಮತ್ತು ಕೈವಲ್ಯದ ಬಗೆಗಿನ ವಿವರ ಕೊನೆಯದಾದ ಕೈವಲ್ಯಪಾದದಲ್ಲಿದೆ. ಅಷ್ಟಾಂಗಯೋಗವನ್ನು ವಿವರವಾಗಿ ಈ ಗ್ರಂಥ ಪ್ರತಿಪಾದಿಸುತ್ತದೆ. ವ್ಯಾಸಭಾಷ್ಯವೆಂಬ ಅತ್ಯಂತ ಪ್ರಾಚೀನವಾದ ಭಾಷ್ಯ ಈ ಗ್ರಂಥಕ್ಕಿದೆ.

	ಮಹಾಭಾಷ್ಯಕಾರನಿಗಿಂತ ಯೋಗಸೂತ್ರಕಾರನಾದ ಪತಂಜಲಿ ಭಿನ್ನನೆಂದು ಭಾವಿಸುವವರು ಯೋಗಸೂತ್ರಕಾರ ಕ್ರಿ.ಶ. ಮೂರು ಅಥವಾ ನಾಲ್ಕನೆಯ ಶತಮಾನದಲ್ಲಿದ್ದಿರಬಹುದೆಂದು ಭಾವಿಸುತ್ತಾರೆ.

	ಮಹಾಭಾಷ್ಯ ಮತ್ತು ಯೋಗಸೂತ್ರಗಳು ಪತಂಜಲಿಯ ಹೆಸರಿನಲ್ಲೆ ಪ್ರಸಿದ್ಧಿಗೆ ಬಂದಿದ್ದರೆ, ಆತನ ಕೃತಿಯೆಂದು ಹೇಳಲಾಗುವ ಚರಕ ಸಂಹಿತೆ ಚರಕನ ಹೆಸರಿನಲ್ಲಿ ಪ್ರಸಿದ್ಧಿಗೆ ಬಂದಿದೆ. ಇತಿ ಚರಕೇ ಪರಂಜಲಿಃ ಎಂದು ನಾಗೋಜಿಭಟ್ಟ ಉಲ್ಲೇಖಿಸುತ್ತಾನೆ. ಚರಕ ಪತಂಜಲಿಯೇ ಎಂದು ಪ್ರಾಚೀನರ ವಾದವೂ ಇದೆ. ಈ ವಾದವನ್ನು ಒಪ್ಪದಿರುವವರೂ ಉಂಟು.

	ಚರಕಸಂಹಿತೆ ಸೂತ್ರಸ್ಥಾನ, ನಿಧನ ಸ್ಥಾನ, ವಿಮಾನ ಸ್ಥಾನ, ಶಾರೀರಸ್ಥಾನ, ಇಂದ್ರಿಯಸ್ಥಾನ, ಚಿಕಿತ್ಸಾಸ್ಥಾನ, ಕಲ್ಪಸ್ಥಾನ, ಮತ್ತು ಸಿದ್ಧಿ ಸ್ಥಾನ ಎಂಬುದಾಗಿ ಎಂಟು ಭಾಗಗಳಿಂದ ಕೂಡಿದೆ. ಆಯುರ್ವೇದ ಶಾಸ್ತ್ರಕ್ಕೆ ಆಧಾರವಾದ ಗ್ರಂಥವಿದು. ಚಕ್ರಪಾಣಿದತ್ತನ ಆಯುರ್ವೇದ ದೀಪಿಕಾ ಎಂಬುದು ಇದರ ಮೇಲಿನ ಶ್ರೇಷ್ಠ ವ್ಯಾಖ್ಯಾನವಾಗಿದೆ.				  (ಸಿ.ಎಚ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ